ಭಾನುವಾರ, ಸೆಪ್ಟೆಂಬರ್ 18, 2016

10ನೇ ವಾರ್ಷಿಕ ಸರ್ವಸದಸ್ಯರ ಸಭೆ- 2016 - ಸಂಪೂರ್ಣ ವರದಿ


10ನೇ ವಾರ್ಷಿಕ  ಸರ್ವಸದಸ್ಯರ ಸಭೆ- 2016  



  ದಿನಾಂಕ-11-09-2016 ರಂದು   10ನೇ ವಾರ್ಷಿಕ ಸರ್ವಸದಸ್ಯರ ಸಭೆಯು, ಸದಸ್ಯರುಗಳ ಪರಸ್ಪರ ಕ್ಷೇಮ-ಕುಶಲೋಪರಿ,ಬೆಳಗಿನ ಉಪಾಹಾರ ಸೇವನೆಯ ನಡುವೆ ಬೆ.10-30ಕ್ಕೆ ಕು||ಅಮೃತ ಮೈಸೂರು ರವರ ನಿರೂಪಣೆ ಮೂಲಕ ಕು||ಅಭಿಘ್ನ ರವರ ದೇವತಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

  ಶ್ರೀಮತಿ ಬಿ.ಕೆ.ಜಯಲಕ್ಷ್ಮಿ ರವರು ಆದಿವಂದ್ಯ ಗಣಪನು ಸರ್ವಸದಸ್ಯರ ಮನದಲ್ಲೂ ನೆಲೆಸುವ ಹಾಗೆ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಶ್ರೀ ಸುದರ್ಶನ್ ಮೈಸೂರು ರವರು ಎಲ್ಲರಿಗೂ ಸ್ವಾಗತ ಕೋರಿದರು. ಕಾರ್ಯದರ್ಶಿಯವರಾದ ಶ್ರೀಮತಿ ವಸಂತಲಕ್ಷ್ಮಿ ವಾರ್ಷಿಕ ವರದಿ ಓದಿದರು. ಖಜಾಂಚಿಗಳ ಪರವಾಗಿ ಶ್ರೀಕೃಷ್ಣಮೂರ್ತಿಯವರು ಹಣಕಾಸು ವಿವರ ನೀಡಿದರು.

   10ನೇ ವಾರ್ಷಿಕ ಸರ್ವಸದಸ್ಯರ ಸಭೆಯು ಕೂಟವು 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದರ ಸುಸಂದರ್ಭವಾಗಿದ್ದು, ಅದರ ನೆನಪಿನಾರ್ಥ ಹೊರತಂದ ಬೇರು ಬಿಳಲುಸ್ಮರಣಸಂಚಿಕೆಯನ್ನು, ಕೂಟದ ಹಿರಿಯ ಸದಸ್ಯರಾದ  ಶ್ರೀಮತಿ ವಿಮಲಮ್ಮನವರು ತಮ್ಮ ಅಮೃತಹಸ್ತದಿಂದ ಬಾರೀ ಕರತಾಡನಗಳ ನಡುವೆ ಬಿಡುಗಡೆಗೊಳಿಸಿದರು.ಸದಸ್ಯರೆಲ್ಲಾ ಸಂಚಿಕೆಯನ್ನು ತುಂಬು ಹೃದಯದಿಂದ ಸ್ವಾಗತಿಸಿ ಹೆಮ್ಮೆಪಟ್ಟರು. ಸ್ಮರಣಸಂಚಿಗೆ ಅರ್ಥಪೂರ್ಣ ಹೆಸರು ನೀಡಿದ ಶ್ರೀ ಸಂದೀಪ್ ರವರಿಗೆ ಧನ್ಯವಾದ ಸಲ್ಲಿಸಲಾಯಿತು.

  ನಂತರ ಕೂಟದ ಹಿರಿಯ ಸದಸ್ಯರಾದ ಶ್ರೀಮತಿ ಕೃಷ್ಣವೇಣಿರವರನ್ನು ಕೂಟದ ಅಧ್ಯಕ್ಷರಾದ ನಾ.ನಾರಾಯಣರವರು  ವೇದಿಕೆಯಲ್ಲಿದ್ದವರ ಸಹಕಾರದೊಂದಿಗೆ ಸನ್ಮಾ ನಿಸಿದರು. ಸನ್ಮಾನಿತರನ್ನು ಕುರಿತು ಮಾತನಾಡಿದ ಅಧ್ಯಕ್ಷರು,  ತಮ್ಮ ಹಿರಿಯ ಸಹೋದರಿಯವರೊಂದಿಗೆ ತಮ್ಮ ಬಾಲ್ಯದ ದಿನಗಳು ಹೇಗಿದ್ದವು ಎಂಬುದನ್ನು  ಎಳೆಎಳೆಯಾಗಿ ಬಿಡಿಸಿಟ್ಟು ಸಹೋದರಿಯವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು. ಮಕ್ಕಳಾದ ಶ್ರೀಮತಿ ವೀಣ ಮತ್ತು ಮನೋರಮ ರವರು ಮಾತನಾಡಿ ಕೆಟ್ಟ ಮಗ ಇರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ  (कुपुत्रो जायेत क्वचिदपि कुमाता न भवति ।)ಎಂಬ ಆಚಾರ್ಯರ ಮಾತುಗಳನ್ನು ನೆನಪಿಸುವಂತೆ ತಮ್ಮ ತಾಯಿ ತಮ್ಮ ಬಾಳಿನಲ್ಲಿ ಹೇಗೆ ನೋವನ್ನು ನುಂಗಿ ನಗುವನ್ನು ಹಂಚಿ ಎಲ್ಲ ತಾಯಂದಿರ ನಡುವೆಯೂ ತಮ್ಮ ತಾಯಿಯವರೇ ದೊಡ್ಡವರಾಗಿ ಕಾಣಿಸುತ್ತಾರೆ ಎಂಬುದನ್ನು ಭಾವನಾತ್ಮಕವಾಗಿ ಹಂಚಿಕೊಂಡರು.ಸಭೆಯಲ್ಲಿದ್ದ ಸದಸ್ಯರುಗಳೆಲ್ಲಾ ಆ ಕ್ಷಣ ತಮ್ಮ ತಮ್ಮ ತಾಯಿಯವರನ್ನು ಸಹಾ ನೆನಪಿಸಿಕೊಳ್ಳುವುದಕ್ಕೆ ಇದು ಅನುವು ಮಾಡಿಕೊಟ್ಟಿತು. ಅಳಿಯಂದಿರಾದ ಶ್ರೀ ಸುಬ್ಬರಾವ್ ರವರು ತಮ್ಮ ಅತ್ತೆಯವರನ್ನು ತಾವು ತಾಯಿಯೆಂದೇ ಭಾವಿಸಿರುವುದಾಗಿ ಅಭಿಮಾನ ವ್ಯಕ್ತಪಡಿಸಿದರು.ಶ್ರೀಮತಿ ಪದ್ಮಿನಿ ಕೃಷ್ಣಮೂರ್ತಿ ಕುಟುಂಬವು ಈ ಸನ್ಮಾನದ ಖರ್ಚನ್ನು ಪ್ರಾಯೋಜಿಸಿತ್ತು.

  ಸದಸ್ಯರೆಲ್ಲಾ ಎಳೆಯರನ್ನೂ ಮೀರಿಸುವಂತೆ ನಂತರ ನಡೆದ ಆಟೋಟಗಳಲ್ಲಿ   ಭಾಗವಹಿಸಿದ್ದು ಚೇತೋಹಾರಿಯಾಗಿತ್ತು. ಹಿರಿಯ-ಕಿರಿಯ ಸದಸ್ಯರುಗಳೆಲ್ಲಾ ರಂಜನೀಯವಾಗಿ ಹರಟೆ,ಕೇಕೆ,ಹಾಸ್ಯಗಳನ್ನು ಮಾಡುತ್ತಾ ಸಭೆಗೆ ಕಳೆ ತುಂಬಿದರು. ಹಿರಿಯ-ಕಿರಿಯರೆನ್ನದೆ ಸದಸ್ಯರು ಸ್ವಪ್ರೇರಣೆಯಿಂದ ಮಧ್ಯಾಹ್ನದ ಭೋಜನ ಕಾರ್ಯದಲ್ಲಿ ಭಾಗವಹಿಸಿದ್ದು ಒಂದು  ಮಾದರಿಯಾಗಿತ್ತು. ಶ್ಲೋಕ-ದೇವರ ನಾಮ ಸ್ಮರಣೆಯ ನಡುವೆ ರುಚಿಯಾದ ಭೋಜನವನ್ನು ಎಲ್ಲರೂ ಸವಿದರು.

  ಪತಿ-ಪತ್ನಿಯರ ನಡುವೆ ಎಷ್ಟು ಪರಸ್ಪರ ತಿಳಿವಳಿಕೆಯಿದೆ ಎಂದು ಪರೀಕ್ಷಿಸುವ ಸಲುವಾಗಿ ನಡೆದ ಸ್ಪರ್ಧೆಯ ಪ್ರಶ್ನೋತ್ತರದಲ್ಲಿ ಕಂಡ ತುಂಟತನದ ಅಂಶಗಳನ್ನು ಸೋದಾಹರಣವಾಗಿ ಪ್ರಸ್ತಾಪಿಸುತ್ತಾ, ಸದಸ್ಯರುಗಳ ಮೈಮನಗಳಲ್ಲಿ ಮಿಂಚು ಪುಳಕಗಳ ಹುಯಿಲೆಬ್ಬಿಸಿ ಅಪರಾಹ್ನದ ಸಭೆಯನ್ನು ಆರಂಭಿಸಲಾಯಿತು.ಸದಸ್ಯರು ಇನ್ನಿಲ್ಲದ ಹರ್ಷ ತೋರಿಸಿದರು. ಸ್ಮರಣಸಂಚಿಕೆ ಹೊರತರಲು ಶ್ರಮಿಸಿದ ಶ್ರೀ ಪ್ರಸನ್ನರವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
  ವೃತ್ತಿ-ಪ್ರವೃತ್ತಿ ಮಾಲಿಕೆ-2 ರಲ್ಲಿ ಮೊದಲಿಗೆ ನಾ.ನಾರಾಯಣ ರವರು ಭಾಗವಹಿಸಿ ಅವರ ವೃತ್ತಿ ಜೀವನದ ಅನೇಕ ಘಟನೆಗಳಲ್ಲಿ ಎಂಥ ಸನ್ನಿವೇಶಗಳು ಸೃಷ್ಟಿಯಾದರೂ ತಾವು ಹೇಗೆ ನ್ಯಾಯದ ಪರವಾಗಿಯೇ ಇದ್ದುದನ್ನು, ಅವರ ವೃತ್ತಿ ಜೀವನದ ಅನೇಕ ಸಂದರ್ಭಗಳನ್ನು ಸ್ಮರಿಸಿಕೊಳ್ಳುತ್ತಾ ವಿವರಿಸಿದರು. ಸದಸ್ಯರು ಅನೇಕ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರ ಪಡೆದರು. ಪ್ರವೃತ್ತಿ ವಿಭಾಗದಲ್ಲಿ ಶ್ರೀಮತಿ ಪದ್ಮಿನಿ ಕೃಷ್ಣಮೂರ್ತಿಯವರನ್ನು ಅವರ ಪಾಕ ಪ್ರಾವೀಣ್ಯತೆ ಹಾಗೂ ಕುಶಲ ಕಲೆಗಳಲ್ಲಿನ ಅವರ ಸಾಧನೆ, ಮತ್ತು ಅವರ ಕಲಿಕೆಯ ಅಗಾಧ ಆಸಕ್ತಿ ಬಗ್ಗೆ ಹಲವರು ರಂಜನೀಯವಾಗಿ ಪ್ರಶ್ನಿಸಿದರು. ಅದಕ್ಕೆ ತಮ್ಮ ಎಂದಿನ ಅಷ್ಟೇ ಉತ್ಸಾಹ ಮುಗ್ಧ ನಗುಮೊಗದಿಂದ ಉತ್ತರಿಸಿ ಸಭೆಗೆ ಹೆಚ್ಚು ರಂಗು ತುಂಬಿಸಿದರು.
  ಅಧ್ಯಕ್ಷರಾದ ಶ್ರೀ ನಾ.ನಾರಾಯಣ ಮತ್ತು  ಶ್ರೀಕೃಷ್ಣಮೂರ್ತಿಯವರು ಕೂಟದ ಉತ್ತೇಜಕ ನಗದು ಬಹುಮಾನವನ್ನು ಕು||ಅನಿಲ್ ಕಶ್ಯಪ್ (ಎಸ್.ಎಸ್.ಎಲ್.ಸಿ.) ಕು||ಹರಿಣಿ(ಪಿ.ಯು.ಸಿ) ಯವರಿಗೆ ವಿತರಿಸಿದರು. ಈ ಬಾರಿ ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಕೂಟದ ಎಲ್ಲ ವಿದ್ಯಾರ್ಥಿಗಳಿಗೂ ಕೂಟದ ಹಿರಿಯ ಸದಸ್ಯರಾದ ಶ್ರೀಮತಿ ಕೃಷ್ಣವೇಣಿರವರು ನಗದು ಬಹುಮಾನ ನೀಡಿ ಮಕ್ಕಳಿಗೆ ಆಶೀರ್ವಾದ ಮಾಡಿದರು. ಆಟೋಟಗಳಲ್ಲಿ ಭಾಗವಹಿಸಿ ಗೆದ್ದವರಿಗೆಲ್ಲಾ ಬಹುಮಾನವನ್ನು ನೀಡಲಾಯಿತು.ಈ ಬಹುಮಾನವನ್ನು  ಶ್ರೀಮತಿ ವಸಂತಲಕ್ಷ್ಮಿ ಕುಟುಂಬವು ಪ್ರಾಯೋಜಿಸಿತ್ತು.ದಶಮಾನೋತ್ಸವದ ಸಂದರ್ಭದ ಸ್ಮರಣಾರ್ಥ ಶ್ರೀಮತಿ ಬಿ.ಕೆ.ಜಯಲಕ್ಷ್ಮಿ- ಶ್ರೀಮತಿ ಬಿ.ಕೆ.ಚಂಚುಲಕ್ಷ್ಮಿ ಕುಟುಂಬದವರಿಂದ  ನೆನಪಿನ ಕಾಣಿಕೆ ವಿತರಿಸಲಾಯಿತು. ನಂತರ ಅಧ್ಯಕ್ಷ ಭಾಷಣದಲ್ಲಿ ಕೂಟದ ಆಶಯಗಳು, ಸಾಗುತ್ತಿರುವ ಹಾದಿ,ಸಾಧಿಸಬೇಕಾದ ಅಂಶಗಳ ಕುರಿತು ನಾ.ನಾರಾಯಣರವರು ಮಾತನಾಡಿದರು.
  ವಾರ್ಷಿಕ ಸರ್ವಸದಸ್ಯರ ಸಭೆಯನ್ನು ತಮ್ಮ ಮನೆಯಲ್ಲಿ ನಡೆಸಲು ಅನುವು  ಮಾಡಿಕೊಟ್ಟ ಹಾಗೂ ಸಂಜೆಯ ಕಾಫಿ ವಗೈರೆಗಳ ಆತಿಥ್ಯನೀಡಿದ್ದಕ್ಕಾಗಿ ಶ್ರೀ ಬಿ.ಕೆ.ರಮೇಶ ರವರನ್ನು ವಿಶೇಷವಾಗಿ ಅಭಿನಂದಿಸುತ್ತಾ, ಶ್ರೀ ವಿಕ್ರಮ ಪದಕಿ ರವರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಬಿ.ಕೆ.ಜಯಲಕ್ಷ್ಮಿ ಶ್ರೀಮತಿ ಬಿ.ಕೆ.ಚಂಚುಲಕ್ಷ್ಮಿ ಯವರ ಮಂಗಳದೊಂದಿಗೆ ವಾರ್ಷಿಕ ಸರ್ವಸದಸ್ಯರ ಸಭೆಯು ಯಶಸ್ವಿಯಾಗಿ ಸಂಪನ್ನವಾಯಿತು.
 
ವಾರ್ಷಿಕ ಸರ್ವಸದಸ್ಯರ ಸಭೆ ಫೋಟೋಗಳು

ಪ್ರಾರ್ಥನೆ-ಕು||ಅಭಿಘ್ನ



'ಬೇರು ಬಿಳಲು' ಸ್ಮರಣಸಂಚಿಕೆ ಬಿಡುಗಡೆ

ಶ್ರೀಮತಿ ವಿಮಲಮ್ಮನವರಿಂದ

ಶ್ರೀಮತಿ ಕೃಷ್ಣವೇಣಿರವರಿಗೆ ಸನ್ಮಾನ


ಕಿರಿಯ-ಹಿರಿಯರ ಆಟೋಟಗಳು

 






ಕಿರಿಯ-ಹಿರಿಯರ ಆಟೋಟಗಳು


  ವೃತ್ತಿ-ಪ್ರವೃತ್ತಿ ಮಾಲಿಕೆ ಸಂವಾದ


ಕು||ಸಿರಿ ಕು||ಅನನ್ಯ ರಿಂದ ನೃತ್ಯ ಕಾರ್ಯಕ್ರಮ
  ವೃತ್ತಿ-ಪ್ರವೃತ್ತಿ ಮಾಲಿಕೆ ಸಂವಾದ


ಉತ್ತೇಜಕ ನಗದು ಬಹುಮಾನ ಪುರಸ್ಕಾರ

ಶ್ರೀಮತಿ ಕೃಷ್ಣವೇಣಿ ರವರಿಂದ


ಉತ್ತೇಜಕ ನಗದು ಬಹುಮಾನ ಪುರಸ್ಕಾರ

ಶ್ರೀಮತಿ ಕೃಷ್ಣವೇಣಿ ರವರಿಂದ

 



*********************ಶುಭವಾಗಲಿ ವಂದನೆಗಳು**********************************