ಭಾನುವಾರ, ಮಾರ್ಚ್ 6, 2016

ಶಿವರಾತ್ರಿ ಹಬ್ಬದ ದಿನ ಶಿವನ ಸ್ಮರಣೆ ಮಾಡುತ್ತಾ.....

     

-ಕ.ವೆಂ.ನಾಗರಾಜ್. ರವರ ಲೇಖನದೊಂದಿಗೆ.......

ಶಿವರಾತ್ರಿ ಹಬ್ಬದ ಶುಭಾಶಯಗಳು

ಜ್ಞಾನೋದಯವಾಗಬೇಕಾದ ದಿನ - ಶಿವರಾತ್ರಿ

     ಶಿವರಾತ್ರಿ- ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗೆ ಚಾಲನೆ ಕೊಡುವ ದಿನವೆಂದರೆ ಸೂಕ್ತವಾದೀತು. ಶಿವರಾತ್ರಿ ವಿಶೇಷವಾದ ಜಾಗರಣೆ ಎಂದರೆ ಜಾಗೃತರಾಗುವುದು, ಎಚ್ಚರಗೊಳ್ಳುವುದು, ಅರಿಯುವುದು ಎಂದೇ ತಿಳಿಯೋಣ, ಕೇವಲ ನಿದ್ರೆ ಮಾಡದಿರುವುದಲ್ಲ. ಶಿವ, ಶಂಭು, ಶಂಕರ, ಹರ, ಮಹಾದೇವ, ಇತ್ಯಾದಿಗಳು ಒಬ್ಬನೇ ದೇವನ ಗುಣವಿಶೇಷಗಳೇ ಹೊರತು ಮತ್ತೇನಲ್ಲ. "ಏಕಂ ಸತ್ ವಿಪ್ರಾಃ ಬಹುಧಾ ವದಂತಿ"- ಸತ್ಯ ಒಂದೇ, ಪ್ರಜ್ಞಾವಂತರು ಅದನ್ನು ಬಹು ರೀತಿಯಲ್ಲಿ ಹೇಳುತ್ತಾರೆ. 'ದೇವನೊಬ್ಬ, ನಾಮ ಹಲವು' ಎಂಬುದು ಸನಾತನ ಧರ್ಮದ ನಿಲುವಾಗಿದೆ. ಹಾಗೆಯೇ 'ಗುರಿಯೊಂದೇ, ದಾರಿಗಳು ಹಲವು' ಎಂಬುದನ್ನೂ ನಾವು ಅರಿತು ಅರಗಿಸಿಕೊಳ್ಳಬೇಕಿದೆ. ದೇವರು ಒಬ್ಬನೇ ಎಂಬುದನ್ನು ಬಹುತೇಕರು ಒಪ್ಪುತ್ತಾರೆ.

    ಪ್ರತಿ ಧರ್ಮವೂ ತನ್ನದೇ ಆದ ರೀತಿಯಲ್ಲಿ ಜಗತ್ತು, ಜೀವ, ದೇವರನ್ನು ವಿವರಿಸುತ್ತದೆ. ಯಾವ ಧರ್ಮ ಏನೇ ಹೇಳಲಿ, ಅವುಗಳನ್ನು ನಾವು ಹೇಗೆಯೇ ಅರ್ಥ ಮಾಡಿಕೊಳ್ಳಲಿ ಅದರಿಂದ ಜಗತ್ತು, ಜೀವ, ದೇವರು ಬದಲಾಗುವುದಿಲ್ಲ. ಆದರೆ, ಈ ಸಮಾಜದಲ್ಲಿ ಬಾಳುತ್ತಿರುವ ನಾವು, ಪಂಚಭೂತಗಳಿಂದ-ಜಲ, ವಾಯು, ಆಕಾಶ, ಅಗ್ನಿ, ನೆಲ- ಒಡಗೂಡಿ ನಮ್ಮೊಳಗೆ ಚೈತನ್ಯರೂಪಿ ಆತ್ಮವನ್ನು ಹೊಂದಿರುವ ನಾವು, ಪಂಚಭೂತಗಳಿಂದಲೇ ನಮ್ಮ ಅಭಿವೃದ್ಧಿ ಹೊಂದಿರುವುದನ್ನು, ಹೊಂದುತ್ತಿರುವುದನ್ನು ಅರಿತು ಆ ಕುರಿತು ಕೃತಜ್ಞತಾಭಾವ ಹೊಂದಿರುವುದು, ಇವೆಲ್ಲದಕ್ಕೂ ಕಾರಣಕರ್ತವಾದ ಆ ಮಹಾನ್ ಶಕ್ತಿಗೆ ನಮಿಸುವುದು ನಾವು ಮಾಡಬೇಕಾದ ಕರ್ತವ್ಯವಾಗಿದೆ. ಈ ಪಂಚಭೂತಗಳಾದ ನೆಲ, ಜಲ, ವಾಯು, ಅಗ್ನಿ, ಆಕಾಶಗಳನ್ನು ಹಾಳು ಮಾಡದೆ, ಕಲುಷಿತಗೊಳಿಸದೆ ನಮ್ಮ ಮುಂದಿನವರಿಗೂ ಉಳಿಸಿ, ಸಂರಕ್ಷಿಸುವುದು ಆ ಪರಮಾತ್ಮನ ನಿಜವಾದ ಪೂಜೆಯಾಗುತ್ತದೆ. ಎಲ್ಲರಲ್ಲೂ, ಎಲ್ಲದರಲ್ಲೂ ದೇವನನ್ನು ಕಾಣೋಣ, ಪೂಜಿಸೋಣ. ಇಂತಹ ಪೂಜೆಯಿಂದ ಆನಂದ, ತೃಪ್ತಿ ಸಿಗದೇ ಇರುವುದಿಲ್ಲ. ಆ ಮಂಗಳಮಯ ಶಿವನನ್ನು ನಮ್ಮಲ್ಲಿ ಆತ್ಮದ ಅರಿವನ್ನುಂಟು ಮಾಡು ಎಂದು ಈ ಶುಭ ಸಂದರ್ಭದಲ್ಲಿ ಪ್ರಾರ್ಥಿಸೋಣ.
ಓಂ ನಮಃ ಶಂಭವಾಯ ಚ ಮಯೋಭವಾಯ ಚ
ನಮಃ ಶಂಕರಾಯ ಚ ಮಯಸ್ಕರಾಯ ಚ
ನಮಃ ಶಿವಾಯ ಚ ಶಿವತರಾಯ ಚ || (ಯಜು. ೧೬.೪೧)
     ಈ ಮಂತ್ರದ ಅರ್ಥ ಹೀಗಿದೆ: ಶಾಂತಿ ಸ್ವರೂಪನಿಗೆ ನಮಸ್ಕಾರ, ಮತ್ತು ಹಾಗೆಯೇ ಆನಂದ ಸ್ವರೂಪನಿಗೆ ನಮಸ್ಕಾರ. ಶಾಂತಿಕಾರಕನಿಗೆ ನಮಸ್ಕಾರ. ಹಾಗೆಯೇ ಆನಂದಕಾರಕನಿಗೆ ನಮಸ್ಕಾರ. ಮಂಗಳ ಸ್ವರೂಪನಿಗೆ ನಮಸ್ಕಾರ. ಅಂತೆಯೇ ಮಂಗಳತರ ಸ್ವರೂಪನಿಗೆ ನಮಸ್ಕಾರ.
-ಕ.ವೆಂ.ನಾಗರಾಜ್.
 (ಕ.ವೆಂ.ನಾಗರಾಜ್. ರವರಲ್ಲಿ ಕ್ಷಮೆಕೋರುತ್ತಾ..ಧನ್ಯವಾದಗಳೊಂದಿಗೆ.)